ಏರ್ಲಿಕ್, ಪಾಲ್: 1854-1915. ಜರ್ಮನಿಯ ಪ್ರಸಿದ್ಧ ವೈದ್ಯ. ಅಣುಜೀವಿವಿಜ್ಞಾನಿ ಮತ್ತು ರಸಾಯನವಿಜ್ಞಾನಿ. 1908ರಲ್ಲಿ ಈತನಿಗೆ ವೈದ್ಯವಿಜ್ಞಾನದಲ್ಲಿ ನೊಬೆಲ್ ಪಾರಿತೋಷಕ ದೊರೆಯಿತು. ರಸಾಯನವಿಜ್ಞಾನವನ್ನು ವೈದ್ಯವಿಜ್ಞಾನ, ಜೀವವಿಜ್ಞಾನಗಳಿಗೆ ಹೊಂದಿಸಿದ್ದು ಈತನ ಬಲು ಮುಖ್ಯಕಾರ್ಯ. ಮೊದಲು ಈತ ವೈದ್ಯವಿಜ್ಞಾನವನ್ನು ಅಭ್ಯಸಿಸಿದ. ಬಳಿಕ ರಸಾಯನವಿಜ್ಞಾನ ಈತನನ್ನು ಆಕರ್ಷಿಸಿತು. ಜೀವಕೋಶದ ವಿವಿಧ ಭಾಗಗಳನ್ನು ನಿರ್ದಿಷ್ಟ ವರ್ಣದ್ರವ್ಯಗಳಿಂದ ಬಣ್ಣಗಟ್ಟುವುದನ್ನು (ಸ್ಟೈನಿಂಗ್) ಕಂಡುಹಿಡಿದು ರಕ್ತಪರೀಕ್ಷಾವಿಜ್ಞಾನಕ್ಕೆ ತಳಹದಿ ಹಾಕಿದ. ಜೀವಂತ ಪ್ರಾಣಿಗೆ ತೊಂದರೆಯಾಗದಂತೆ ಅದರ ನಿರ್ದಿಷ್ಟ ಅಂಗಗಳಿಗೆ ಬಣ್ಣಗಟ್ಟುವುದನ್ನು ಕಂಡುಹಿಡಿದ. ಕ್ಷಯರೋಗದ ಅಣುಜೀವಿಯನ್ನು ಸೂಕ್ಷ್ಮದರ್ಶಕದಲ್ಲಿ ನೋಡಲು ಒಂದು ವಿಧಾನವನ್ನು ಆವಿಷ್ಕರಿಸಿದ್ದೂ ಈತನೇ. ಇಮ್ಯೂನಾಲಜಿ ಕ್ಷೇತ್ರದಲ್ಲಿ ಈತ ಬಹಳ ಉಪಯುಕ್ತ ಕಾರ್ಯಗಳನ್ನು ನಡೆಸಿದ. ಇದೆಲ್ಲಕ್ಕಿಂತ ಮುಖ್ಯವೆಂದರೆ ಆಧುನಿಕ ರಾಸಾಯನಿಕ ಚಿಕಿತ್ಸಾಕ್ರಮ ಈತನಿಂದಲೇ ಮೊದಲಾದದ್ದು. ಸಿಫಿಲಿಸ್ ರೋಗದ ಔಷಧಿಯಾದ ಸಾಲ್ವರ್ಸಾನ್-606ನ್ನು ಕಂಡು ಹಿಡಿದುದು ಈತನ ಗಮನಾರ್ಹ ಸಾಧನೆ. ತರ್ಕಬದ್ಧವಾಗಿ ಯೋಚಿಸಿ ಒಂದು ಹೊಸ ರಾಸಾಯನಿಕ ಸಂಯುಕ್ತವನ್ನು ಯಾವುದೇ ಒಂದು ರೋಗಕ್ಕೆ ಹೇಳಿ ಮಾಡಿಸಿದಂತೆ ಔಷಧವಾಗಿ ತಯಾರಿಸುವುದು ಅಂದಿನಿಂದ ಮೊದಲಾಯಿತು. ಈಗ ಇಂಥ ಔಷಧಗಳ ತಯಾರಿಕೆ ಒಂದು ಬೃಹತ್ ಕೈಗಾರಿಕೆಯಾಗಿದೆ.        (ಎಂ.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ